ಹೆರೋಡ್ ಮಹಾಶಯ
ಕ್ರಿ.ಪೂ.73-4. ಪ್ಯಾಲಸ್ತೀನಿನ ದೊರೆ. ಇಡ್ಯೂಮಿಯನ್ ಮನೆತನದ ಆಂಟಿಪೇಟರನ 2ನೆಯ ಮಗ. ದಕ್ಷಿಣ ಪ್ಯಾಲಸ್ತೀನಿನಲ್ಲಿ ಜನಿಸಿದ. ಆಂಟಿಪೇಟರನನ್ನು ಜೂಲಿಯಸ್ ಸೀಸರನು ಜುಡಿಯದ ಭಂಡಾರಿಯಾಗಿ ನೇಮಿಸಿದ್ದ. ಜುಡಿಯ ರೋಮನ್ ಸಾಮ್ರಾಜ್ಯಕ್ಕೆ ಸೇರಿತ್ತು. ಆಂಟೊನಿಯ ಶಿಫಾರಸಿನಿಂದಲೂ ಹ್ಯಾಸ್‍ಮೊನಿ ಯನ್ ಮನೆತನದ ರಾಜಕುಮಾರಿಯನ್ನು ವಿವಾಹವಾಗಿದ್ದರಿಂದಲೂ ಈತ ಕ್ರಿ.ಪೂ.37ರಲ್ಲಿ ಜುಡಿಯಕ್ಕೆ ದೊರೆಯಾಗಿ ಕ್ರಿಪೂ. 4ರವರೆಗೆ ಯಹೂದ್ಯರನ್ನು ಬಹಳ ದಕ್ಷತೆಯಿಂದ ಆಳಿದ. ರೋಮನ್ ಸಾಮ್ರಾಜ್ಯಕ್ಕೆ ಕಪ್ಪಕಾಣಿಕೆ ಒಪ್ಪಿಸುತ್ತಿದ್ದ. ಅಗಸ್ಟಸ್ ಚಕ್ರವರ್ತಿಯಿಂದ ತನ್ನ ಪದವಿಯನ್ನು ಸ್ಥಿರವಾಗಿ ಪಡೆದ ಇವನ ಬೆಂಬಲಕ್ಕೆ ಜೆರೂಸಲೆಮ್‍ನಲ್ಲಿ ರೋಮನ್‍ಸೈನ್ಯದ ತುಕಡಿಯೊಂದಿತ್ತು. ರಾಜತಂತ್ರದಲ್ಲೂ ಯುದ್ಧದಲ್ಲೂ ನಿಪುಣನಾಗಿದ್ದ ಇವನು ಜೆರೂಸಲೆಮ್‍ನಲ್ಲಿ ಅದ್ಭುತವಾದ ದೇವಾಲಯವನ್ನು ಪುನರ್ನಿರ್ಮಾಣಮಾಡಿ, ಭವ್ಯವಾದ ರಂಗಮಂದಿರ (ಥಿಯೇಟರ್) ಮತ್ತು ವರ್ತುಲ ಕ್ರೀಡಾಮಂದಿರ (ಆಂಫಿಥಿಯೇಟರ್) ಇವುಗಳ ನಿರ್ಮಾಣವನ್ನು ಕೈಕೊಂಡ. ಅಗಸ್ಟಸ್‍ನ ಗೌರವಾರ್ಥವಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದ. ದರೋಡೆಕಾರರ ಮತ್ತು ಅರಬ್ಬರ ದಾಳಿಯನ್ನು ತಡೆಗಟ್ಟಲು ದೇಶದಲ್ಲಿ ಭದ್ರವಾದ ಕೋಟೆಗಳನ್ನು ಕಟ್ಟಿಸಿ ಹಳೆಯ ಕೋಟೆಗಳನ್ನು ಸರಿಪಡಿಸಿದ. ಮುಖ್ಯ ಕೋಟೆಯೊಂದಕ್ಕೆ ರೋಮನ್ ಚಕ್ರವರ್ತಿಯ ಗೌರವಾರ್ಥವಾಗಿ ಸಿಸಾರಿಯ ಎಂದು ಹೆಸರಿಟ್ಟ. ಅನೇಕ ಹೊಸ ನಗರಗಳನ್ನು ಸ್ಥಾಪಿಸಿದ. ಜೆರೂಸಲೆಮ್‍ನಲ್ಲಿ ದೇವಾಲಯದ ಬಳಿ ಅಪಾರ ಹಣ ವೆಚ್ಚಮಾಡಿ ಅಮೂಲ್ಯ ವಸ್ತುಗಳಿಂದ ಅರಮನೆ ಕಟ್ಟಿಸಿದ. ಹೆರೋಡಿಯಂ ಎಂಬ ಹೆಸರಿನ ಇವನ ನಿವಾಸ ಅತ್ಯಾಕರ್ಷಕವಾಗಿತ್ತು. ಸ್ವಸಾಮಥ್ರ್ಯದಿಂದ ಅಗಸ್ಟಸ್ ಚಕ್ರವರ್ತಿಯ ಮೆಚ್ಚುಗೆ ಗಳಿಸಿದ ಇವನು ಯಹೂದ್ಯ ಪಂಗಡಕ್ಕೆ ಹಿತವಾದ ಕೆಲಸಗಳನ್ನು ಮಾಡಿದ. ಯಹೂದ್ಯ ಸರ್ಕಾರ, ಸಮಾಜ ಮತ್ತು ಇತರ ಸಂಸ್ಥೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಚರಿತ್ರೆಯಲ್ಲಿ ಮಹಾಶಯನೆಂದು ಪ್ರಸಿದ್ಧನಾದ.				
(ಎ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ